ಕಾಂಗೋ ಗಣರಾಜ್ಯ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಸಮಭಾಜಕ ಪ್ರದೇಶದ ಒಂದು ಗಣರಾಜ್ಯ.  ಸ್ವತಂತ್ರವಾಗುವುದಕ್ಕೆ ಮೊದಲು ಇದು ಫ್ರೆಂಚ್ ಸಮಭಾಜಕೀಯ ಆಫ್ರಿಕದ ಮಧ್ಯ ಕಾಂಗೋ ಅಥವಾ ಮೊಯೆನ್-ಕಾಂಗೋದ ಒಂದು ರಾಜ್ಯವಾಗಿತ್ತು. ಗ್ಯಾಬನ್, ಕ್ಯಾಮರೂನ್, ಮಧ್ಯ ಆಫ್ರಿಕ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಆಂಗೋಲ ಮತ್ತು ಅಟ್ಲಾಂಟಿಕ್ ಸಾಗರ-ಇವು ಇದರ ಮೇರೆಗಳು. ವಿಸ್ತೀರ್ಣ 1,34,749 ಚ.ಮೈ. (3,49,000ಚ.ಮೀ.), ಜನಸಂಖ್ಯೆ 8,50,000(1966ರ ಅಂದಾಜು). ರಾಜಧಾನಿ ಬ್ರ್ಯಾಜûವಿಲ್. ಕಾಂಗೋ ಎಂಬ ಹೆಸರಿನ ಇನ್ನೊಂದು ಗಣರಾಜ್ಯ (ನೋಡಿ- ಕಾಂಗೋ-ಪ್ರಜಾಸತ್ತಾತ್ಮಕ-ಗಣರಾಜ್ಯ)  ಇರುವುದರಿಂದ ಇದನ್ನು ಬ್ರ್ಯಾಜûವಿಲ್ ಕಾಂಗೋ ಎಂದು ಕರೆಯುವ ವಾಡಿಕೆಯಿದೆ. 

 ಮೇಲ್ಮೈಲಕ್ಷಣ :  ಕಾಂಗೋ ಗಣರಾಜ್ಯ ಕಾಂಗೋ ನದೀ ಕಣಿವೆಯ ಒಂದು ಭಾಗ. ಈ ದೇಶದ ಪೂರ್ವದ ಗಡಿರೇಖೆಯಂತೆ ಹರಿಯುವ ಯುಬಾಂಗ್ ಮತ್ತು ಕಾಂಗೋ ನದಿಗಳ ಬಲದಂಡೆಯ ಬಳಿಯ ಪ್ರದೇಶ ಒಂದು ಮೈದಾನ. ಇದು ನದೀಕಣಿವೆಯ ನಡುಭಾಗದ ಮೆಕ್ಕಲುಮಣ್ಣಿನಿಂದ ಆವೃತ. ಇದರ ಅಗಲಕ್ಕೆ ಅಲ್ಲಲ್ಲಿ ಹಲವಾರು ನದಿಗಳೂ ಹಳ್ಳಗಳೂ ಹಾದುಹೋಗುತ್ತವೆ. ಮೊಟಾಬ ಎಂಬುದು ಇಂಥ ನದಿಗಳ ಪೈಕಿ ಒಂದು.  ಅದು ಡಾಂಗೌ ಬಳಿ ಯುಬಾಂಗನ್ನು ಸೇರುತ್ತದೆ.  ಲಿಕೌಲ, ಸಾಂಗ ಮತ್ತು ಅಲಿಮ ಇತರ ನದಿಗಳು. ಇವೆಲ್ಲವೂ ಬಹುತೇಕ ಜಲಯಾನ ಯೋಗ್ಯ. ಕಾಂಗೋ ಯುಬಾಂಗ್‍ಗಳ ಮೇಲೆ ಬ್ರ್ಯಾಜûವಿಲ್‍ನಿಂದ 1,500 ಮೈ. ದೂರ ಯಾನ ಮಾಡಬಹುದು. ಈ ಮೈದಾನ ಪಶ್ಚಿಮದ ಕಡೆಗೆ ಕ್ರಮವಾಗಿ ಎತ್ತರವಾಗಿ ಸಾಗಿ, ಅಂತಿಮವಾಗಿ ಪ್ರಸ್ಥಭೂಮಿಯಲ್ಲಿ ಪರ್ಯವಸಾನವಾಗುತ್ತದೆ. ಇದನ್ನು ಅಲ್ಲಲ್ಲಿ ಕತ್ತರಿಸುವ ಕಣಿವೆಗಳುಂಟು. ಇದರ ಪಶ್ಚಿಮದಲ್ಲಿ ಪರ್ವತಶ್ರೇಣಿಗಳ ಶಿರಃ ಪ್ರದೇಶವಿದೆ. ದಕ್ಷಿಣದ ಕಡಲತೀರವೊಂದು ಕಿರುಮೈದಾನ.

 ವಾಯುಗುಣ, ಸಸ್ಯ : ಗರಿಷ್ಠ ಉಷ್ಣತೆಯಿರುವ ಪ್ರದೇಶದ ಪಟ್ಟಿ ಸ್ವಲ್ಪ ಉತ್ತರದ ಕಡೆಗಿದ್ದರೂ ಸಮಭಾಜಕ ಈ ರಾಜ್ಯದ ನಡುವೆಯೇ ಹಾದುಹೋಗುವುದರಿಂದ ಇಲ್ಲಿಯದು ಬಹುತೇಕ ಸಮಭಾಜಕ ಪ್ರದೇಶದ ವಾಯುಗುಣವೆಂದೇ ಹೇಳಬಹುದು. ವರ್ಷವೆಲ್ಲ ಇಲ್ಲಿ ಸರಾಸರಿ ಉಷ್ಣತೆ 70ಲಿ ಫ್ಯಾ.-80ಲಿ ಫ್ಯಾ. (21ಲಿ ಸೆಂ.-27ಲಿ ಸೆಂ.) ನಡುವೆ ಇರುತ್ತದೆ. ವಾರ್ಷಿಕ ಮಳೆ 48".  ಮಳೆಗಾಡಿರುವುದು ಸಮಭಾಜಕದ ದಕ್ಷಿಣದ ಮೈದಾನದಲ್ಲಿ ಮಾತ್ರ.  ಮಧ್ಯ ಆಫ್ರಿಕ ಗಣರಾಜ್ಯದ ಬಳಿಯಲ್ಲಿರುವ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಅದು ಮರ ಬೆರೆತ ಹುಲ್ಲುಮೈದಾನ.  ಸವಾನ ಕರಾವಳಿ ಮೈದಾನ, ಮೇಯೋಂಬ್ ಪರ್ವತ ನೆರಳಿನ ನೆಲದಲ್ಲೂ ಬಾಟೆಕ್‍ನ ಮರಳು ಕಲ್ಲಿನ ಪ್ರದೇಶದಲ್ಲೂ ಇದೇ ಸಸ್ಯಪ್ರಕಾರವನ್ನು ಕಾಣಬಹುದು.

ವ್ಯವಸಾಯ, ಕೈಗಾರಿಕೆ : ಕಾಂಗೋದ ಕಾಡುಗಳನ್ನು ಅಲ್ಲಲ್ಲಿ ಕಡಿಯಲಾಗಿದೆ.  ಉಳಿದ ಕಡೆಗಳಲ್ಲೂ ಅದನ್ನು ಮೊದಲಿನಂತೆ ಸ್ವಚ್ಛಂದವಾಗಿ ಬೆಳೆಯಗೊಟ್ಟಿಲ್ಲ.  ಕೆಸಾವ ಇಲ್ಲಿಯ ಮುಖ್ಯ ಆಹಾರ ಬೆಳೆ. ಸಾಂಗ ಮತ್ತು ನಿಯಾರಿ ಕಣಿವೆಗಳು ರಫ್ತಿಗಾಗಿ ಬೆಳೆತೆಗೆಯಲು ಅನುಕೂಲಕರ. ನಿಯಾರಿ ಬೇಸಾಯ ಪ್ರದೇಶ ಕಾಂಗೋ-ಓಷನ್ ರೈಲು ಮಾರ್ಗಕ್ಕೆ ಹತ್ತಿರದಲ್ಲಿರುವುದರಿಂದ ಅಲ್ಲಿ ಅನೇಕ ತೋಟಗಳಿವೆ. ಕೆಸಾವ, ನೆಲಗಡಲೆ, ನಾರುಗಿಡ ಮತ್ತು ಕಬ್ಬುಗಳನ್ನು ಇಲ್ಲಿ ಬೆಳೆಯುತ್ತಾರೆ. ದನಕರುಗಳನ್ನು ಸಾಕುವುದೂ ಉಂಟು. ಇವೆಲ್ಲ ಎರಡನೆಯ ಮಹಾಯುದ್ಧದಿಂದೀಚೆಗೆ ಬೆಳೆದ ಉದ್ಯಮಗಳು. ಮುಸುಕಿನ ಜೋಳ, ಕಬ್ಬು, ಎಣ್ಣೆ ಬೀಜ ಮುಂತಾದ ಬೆಳೆಗಳ ಅಭಿವೃದ್ಧಿಗಾಗಿ ಪ್ರಯೋಗಕೇಂದ್ರಗಳೂ ಸಂಶೋಧನಕೇಂದ್ರಗಳೂ ಸ್ಥಾಪಿತವಾಗಿವೆ.

 ಕಾಂಗೋದಲ್ಲಿ ಅನೇಕ ಖನಿಜ ನಿಕ್ಷೇಪಗಳು ಉಂಟು. ಮಯೋಂಬದ ಚಿನ್ನ ಮತ್ತು ವಜ್ರ, ಮ್ಛೌಟಿ ಮತ್ತು ಮಿಂಡೌಲಿಯ ಸೀಸ ಮತ್ತು ತಾಮ್ರ ಇವು ಮುಖ್ಯ. ಬ್ರ್ಯಾಜûವಿಲ್ ಮತ್ತು ಪಾಯಿಂಟ್-ನಾಯಿರ್‍ಗಳಲ್ಲಿ ಕೆಲವು ಕೈಗಾರಿಕೆಗಳಿವೆ.

 ನೆಲಗಡಲೆ, ಕಕೇವೊ, ಕಾಫಿ, ಮುಸುಕಿನ ಜೋಳ, ಬತ್ತ, ತಾಳೆಹಣ್ಣು, ಹೊಗೆ ಸೊಪ್ಪು, ತಾಳೆಬೀಜ, ತೆಂಗಿನಕಾಯಿ, ಮೀನು, ಮರ, ಚಿನ್ನ, ಸೀಸ, ಸತು, ತಾಮ್ರ, ತವರ, ಎಣ್ಣೆ, ಸಕ್ಕರೆ, ಬೀರ್, ಸಾಬೂನು-ಇವು ಮುಖ್ಯ ಉತ್ಪನ್ನಗಳು.

ವ್ಯಾಪಾರ, ಅಭಿವೃದ್ಧಿ, ಸಾರಿಗೆ : ಗಟ್ಟಿ ಮರ, ವಜ್ರ, ಎಣ್ಣೆ, ಸಕ್ಕರೆ ಮುಂತಾದವುಗಳ ರಫ್ತು ಕಾಂಗೋದ ಅರ್ಥವ್ಯವಸ್ಥೆಗೆ ಅಸ್ತಿಭಾರ.  ಪ್ರತಿಯಾಗಿ ಅದು ಯಂತ್ರ, ಮೋಟಾರು, ಜವಳಿ, ಪೆಟ್ರೊಲಿಯಂ ವಸ್ತು, ಕಬ್ಬಿಣ ಉಕ್ಕು, ಒಣಗಿಸಿ ಉಪ್ಪುಹಾಕಿದ ಮೀನು, ಕಾಗದ ಮತ್ತು ವೈನ್‍ಗಳನ್ನು ತರಿಸಿಕೊಳ್ಳುತ್ತದೆ.  ಇದರ ಬಹುತೇಕ ವ್ಯಾಪಾರ ಫ್ರಾನ್ಸಿನೊಂದಿಗೆ.  ಫ್ರಾನ್ಸಿನಿಂದಲೂ ಐರೋಪ್ಯ ಆರ್ಥಿಕ ಸಮುದಾಯದ ಇತರ ದೇಶಗಳಿಂದಲೂ ಅದು ಸಾಲ, ಆರ್ಥಿಕ ನೆರವು ಮತ್ತು ತಾಂತ್ರಿಕ ಸಹಾಯ ಪಡೆದಿದೆ.  ಕೊಯಿತಾವಿನ ಮೇಲೆ ಕಟ್ಟೆ ಕಟ್ಟಿ 9,61,500 ಕಿವಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.  ಇದರಿಂದ ಅಲ್ಯೂಮಿನಿಯಂ, ಫೆರೊಮ್ಯಾಂಗನೀಸ್, ಫೆರೊ-ಸಿಲಿಕಾನ್ ಮತ್ತು ಕಾಗದದ ತಿರುಳು ಕೈಗಾರಿಕೆಗಳ ಸ್ಥಾಪನೆಯಾಗಿದೆ.  ಗ್ಯಾಬನ್‍ನಲ್ಲಿ ಸಿಗುವ ಮ್ಯಾಂಗನೀಸ್ ಅದುರನ್ನು ಪಾಯಿಂಟ್-ನಾಯಿರ್ ರೇವಿಗೆ ಸಾಗಿಸಲು ರೈಲು ಮತ್ತು ಕೇಬಲ್ ಮಾರ್ಗ ನಿರ್ಮಾಣವಾಗಿದೆ.  ಇವು ಬ್ರ್ಯಾಜûವಿಲ್ ಕಾಂಗೋದ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳು.

ಯುಬಾಂಗ್ ಮತ್ತು ಕಾಂಗೋ ನದಿಗಳು ಮುಖ್ಯ ಸಂಚಾರಮಾರ್ಗಗಳು. ಕಾಂಗೋ ನದಿಯ ಮೇಲಣ ಮುಖ್ಯ ಬಂದರು ಬ್ರ್ಯಾಜûವಿಲ್. ಇಲ್ಲಿಯ ರೈಲು ಮಾರ್ಗಗಳು ಎರಡು: ಒಂದು ಅಟ್ಲಾಂಟಿಕ್ ಸಾಗರ ಮುಖದಲ್ಲಿರುವ ಪಾಯಿಂಟ್-ನಾಯಿರ್‍ನಿಂದ ಬ್ರ್ಯಾಜûವಿಲ್ ವರೆಗೆ, ಇನ್ನೊಂದು ಬ್ರ್ಯಾಜûವಿಲ್‍ನಿಂದ ಗ್ಯಾಬನ್‍ನಲ್ಲಿರುವ ಫ್ರಾನ್ಸ್‍ವಿಲ್‍ವರೆಗೆ. ಗ್ಯಾಬನ್-ಕಾಮಿಲಾಗ್ ರೈಲ್ವೆಗೂ ಮಸೆಂಜೊ-ನ್ಯಾಂಗಿಯ ಅರಣ್ಯ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣಕಾರ್ಯ 1963ರಲ್ಲಿ ಆರಂಭವಾಯಿತು. ಐರೋಪ್ಯ ಆರ್ಥಿಕ ಸಮುದಾಯದ ಸಹಾಯದಿಂದ ಕೈಕೊಳ್ಳಲಾದ ಈ ಕಾರ್ಯಕ್ರಮದಿಂದ ಬ್ರ್ಯಾಜûವಿಲ್ ಕಾಂಗೋದ ಅರಣ್ಯೋತ್ಪನ್ನ ಸೇ.30ರಷ್ಟು ಅಧಿಕವಾಗುತ್ತದೆ.  ಅಲ್ಲಿಯ ಮುಖ್ಯರಸ್ತೆಗಳು ಪಾಯಿಂಟ್-ನಾಯಿರ್‍ನಿಂದ ಬ್ರ್ಯಾಜûವಿಲ್‍ಗೂ ಅಲ್ಲಿಂದ ಓಯೆಸೋಗೂ ಡಾಲಿಸೀಯಿಂದ ಗ್ಯಾಬನ್ ಮುಖಾಂತರ ಕ್ಯಾಮರೂನ್‍ಗೂ ಸಂಪರ್ಕ ಕಲ್ಪಿಸುತ್ತವೆ.  ಕಾಂಗೋದಲ್ಲಿ ಆಂತರಿಕ ವಿಮಾನ ವ್ಯವಸ್ಥೆಯೂ ಉಂಟು.

ಜನಸಂಖ್ಯೆ, ನಗರಗಳು ಮತ್ತು ಪಟ್ಟಣಗಳು : ಕಾಂಗೋದ ಜನ ಸಂಖ್ಯೆಯಾದ 8,50,000ದಲ್ಲಿ (1966ರ ಅಂದಾಜು) ಬಂಟು ನೀಗ್ರೋಗಳೇ ಅಧಿಕ.  ಐರೋಪ್ಯರು ಸುಮಾರು 11,000. ಜನಸಾಂದ್ರತೆ: ಚ.ಮೈ.ಗೆ 6.4. ಬಂಟು (ಅದರ ನಾನಾ ಉಪಭಾಷೆಗಳು) ಅಲ್ಲಿಯ ಜನರ ಭಾಷೆ.  ಫ್ರೆಂಚ್ ಅಧಿಕೃತ ಭಾಷೆ.

 1966-67ರಲ್ಲಿ ದೇಶದಲ್ಲಿ 857 ಪ್ರಾಥಮಿಕ ಶಾಲೆಗಳೂ 52 ದ್ವಿತೀಯಕ ಶಾಲೆಗಳೂ 33 ತಾಂತ್ರಿಕ ಶಾಲೆಗಳೂ ಇದ್ದುವು. ಇವುಗಳ ವಿದ್ಯಾರ್ಥಿಗಳ ಸಂಖ್ಯೆ ಅನುಕ್ರಮವಾಗಿ 1,94,968, 15,939 ಮತ್ತು 2,931. ಪ್ರಾಥಮಿಕ ಶಾಲೆಗಳು ಸಂಖ್ಯೆ ಸಾಕಷ್ಟಿಲ್ಲದಿದ್ದರೂ ಅಕ್ಷರಸ್ಥರ ಪ್ರಮಾಣ ಹೆಚ್ಚಾಗಿಯೇ ಇದೆ.  6 ರಿಂದ 16ರ ವರೆಗಿನ ವಯಸ್ಸಿನ ಮಕ್ಕಳಿಗೆಲ್ಲ ಕಡ್ಡಾಯ ಶಿಕ್ಷಣ ಜಾರಿಗೆ ಬರುತ್ತದೆ.  1965ರಲ್ಲಿ ಎಲ್ಲ ಖಾಸಗಿ ಶಾಲೆಗಳನ್ನೂ ಸರ್ಕಾರ ತೆಗೆದುಕೊಂಡಿತು.  ತಾಂತ್ರಿಕ ಶಿಕ್ಷಣಕ್ಕಾಗಿ ಅನೇಕ ವಿದ್ಯಾರ್ಥಿಗಳು ಫ್ರಾನ್ಸಿಗೆ ಹೋಗುತ್ತಾರೆ.  ಬ್ರ್ಯಾಜûವಿಲ್‍ನ ಮಹಾ ವಿದ್ಯಾಲಯವನ್ನು ವಿಶ್ವವಿದ್ಯಾನಿಲಯದ ಅಂತಸ್ತಿಗೆ ಏರಿಸುವ ಸಿದ್ಧತೆ ನಡೆದಿತ್ತು  (1969).

 ಫುಟ್‍ಬಾಲ್, ವಾಲಿಬಾಲ್, ಬ್ಯಾಸ್ಕೆಟ್‍ಬಾಲ್, ಅಂಗಸಾಧನೆ ಇವು ಇಲ್ಲಿಯ ಮುಖ್ಯ ಕ್ರೀಡೆಗಳು. ಪ್ರಥಮ ಆಫ್ರಿಕನ್ ಕ್ರೀಡಾಕೂಟವನ್ನೇರ್ಪಡಿಸಿದ್ದು ಬ್ರ್ಯಾಜûವಿಲ್‍ನಲ್ಲಿ  (1965).

 1963ರಲ್ಲಿ ನಿವೃತ್ತಿವೇತನ ಯೋಜನೆಯೊಂದನ್ನು ಸರ್ಕಾರ ಜಾರಿಗೆ ತಂದಿತು. ಸರ್ಕಾರ ಆಸ್ಪತ್ರೆಗಳನ್ನೂ ಆರೋಗ್ಯ ಕೇಂದ್ರಗಳನ್ನೂ ನಡೆಸುತ್ತಿದೆ.

 ಆಫ್ರಿಕದ ಫ್ರೆಂಚ್ ಸಮುದಾಯದ ಫ್ರ್ಯಾಂಕ್ (ಸಿ.ಎಫ್.ಎ.) ಅಲ್ಲಿಯ ನಾಣ್ಯ. 1,000 ಸಿ.ಎಫ್.ಎ. = 4.05 ಅಮೆರಿಕನ್ ಡಾಲರ್. ಆಗಸ್ಟ್ 15 ಕಾಂಗೋದ ಸ್ವಾತಂತ್ರ್ಯ ದಿನ.

 ಬ್ರ್ಯಾಜûವಿಲ್ ಅಲ್ಲಿಯ ಅತ್ಯಂತ ದೊಡ್ಡ ನಗರ ಮತ್ತು ರಾಜಧಾನಿ; ಜನಸಂಖ್ಯೆ 1,35,632 (1962ರ ಅಂದಾಜು). ಪಾಯಿಂಟ್-ನಾಯಿರ್, ಇಂಫಾಂಡೊ, ಫೋಟ್-ರೌಸೆ, ಡಾಲಿಸೀ ಮತ್ತು ಜಂಬಾಲ ಇತರ ಪಟ್ಟಣಗಳು.

 ಇತಿಹಾಸ : ಕಾಂಗೋ ರಾಜ್ಯದ ಬ್ರ್ಯಾಜûವಿಲ್‍ನಲ್ಲೂ ನಿಯಾರಿ ಕಣಿವೆಯಲ್ಲೂ ಪ್ರಾಗೈತಿಹಾಸಿಕ ಮಾನವನ ನೆಲೆಗಳು ಕಂಡುಬಂದಿವೆ.  ಎರಡು ಪಕ್ಕಗಳಿರುವ ಒರಟು ಕಲ್ಲಿನಾಯುಧಗಳನ್ನು ಬಳಸುತ್ತಿದ್ದ ಕೆಳಪೇಲಿಯೊಲಿಥಿಕ್, ಎರಡು ಪಕ್ಕಗಳಿರುವ ಮತ್ತು ಚಕ್ಕೆಕಲ್ಲಿನ ಆಯುಧಗಳುಳ್ಳ ಸಂಗೊವನ್ ಮತ್ತು ಮೊನಚಾದ ಆಯುಧಗಳನ್ನು ಉಪಯೋಗಿಸುತ್ತಿದ್ದ ಉಪೆಂಬನ್ - ಹೀಗೆ ಮೂರು ಸಂಸ್ಕøತಿಗಳ ಮಟ್ಟಗಳನ್ನು ಇಲ್ಲಿ ಕಾಣಬಹುದಾಗಿದೆ.  ಪಿಗ್ಮಿಗಳು ಇಲ್ಲಿಯ ಅತ್ಯಂತ ಪುರಾತನವಾಸಿಗಳು. ಇವರು ಯುಬಾಂಗ್ ಬಳಿಯಿಂದ ಬಂದವರಿರಬೇಕು.  ಸು. 15ನೆಯ ಶತಮಾನದಲ್ಲಿ ಕಾಂಗೋದಿಂದ ಇಲ್ಲಿಗೆ ಬಂದಿರಬಹುದಾದ ಕಾಂಗೋ ಜನರಲ್ಲಿ ವಿಲಿ ಗುಂಪಿನವರು ತೀರಪ್ರದೇಶದಲ್ಲೂ ಸುಂಡಿ ಗುಂಪಿನವರು ಅದಕ್ಕೆ ಪೂರ್ವದ ನದೀಪ್ರದೇಶದಲ್ಲೂ ನೆಲೆಸಿದರು.  ಈ ಎರಡು ಗುಂಪುಗಳೂ ಲೊವಾಂಗೋ ಮತ್ತು ಕಕಾಂಗೋ ಎಂಬ ಎರಡು ರಾಜ್ಯಗಳನ್ನು ಸ್ಥಾಪಿಸಿದುವು.  ಇವೆರಡೂ ಕಾಂಗೋ ಸಾಮ್ರಾಜ್ಯದ ಸಾಮಂತ ರಾಜ್ಯಗಳಾಗಿದ್ದವು.  ಸ್ಟ್ಯಾನ್ಲಿ ಮಡುವಿನ ಪ್ರದೇಶದಲ್ಲಿದ್ದುದು ಟೆಕ್‍ಗಳ ರಾಜ್ಯ.  ಇವರ ದೊರೆಯನ್ನು (ಮಕಾಕೋ) ನಾಯಕರು ಆರಿಸುತ್ತಿದ್ದರು. ಈತ ತಾಮ್ರದ ತಗಡಿನ ಕತ್ತುಪಟ್ಟಿ ತೊಟ್ಟು ಚಿರತೆಯ ಚರ್ಮ ಉಡುತ್ತಿದ್ದ.  ಈಶಾನ್ಯ ಪ್ರದೇಶದಲ್ಲಿದ್ದವರು ಮ್ಯೋಚಿಗಳು. ಇವರ ಹಳ್ಳಿಗಳು ಕೋಟೆಗಳೊಳಗಡೆ ಇದ್ದುವು.  ಲಿಕೌಲ ಮತ್ತು ಸಾಂಗ ಜೌಗು ನೆಲದಲ್ಲಿದ್ದವರು 'ನೀರಿನ ಜನ' ಮತ್ತು ಪಿಗ್ಮಿಗಳು. ಕಾಂಗೋದ ಕರಾವಳಿ ಪ್ರದೇಶ 15ನೆಯ ಶತಮಾನದಲ್ಲಿಯೇ ಪೋರ್ಚುಗೀಸ್ ನಾವಿಕರಿಗೆ ಪರಿಚಯವಾಗಿತ್ತು. ಕಾಂಗೋ ನದಿಯ ಮುಖವನ್ನು ದಿಯೆಗೋ ಕ್ಯಾಮ್ 1484ರಲ್ಲಿ ಕಂಡುಹಿಡಿದ. ಗುಲಾಮರ ಮತ್ತು ದಂತದ ಆಸೆಯಿಂದ ಫ್ರೆಂಚ್ ವ್ಯಾಪಾರಿ ಕಂಪನಿಗಳು ಈ ಪ್ರದೇಶವನ್ನು 17ನೆಯ ಶತಮಾನದಲ್ಲಿ ಪ್ರವೇಶಿಸಿದುವು. 1785ರ ವರೆಗೆ ಇಲ್ಲಿಯ ಕರಾವಳಿಗೆ ವರ್ಷಕ್ಕೆ ನೂರಕ್ಕಿಂತಲೂ ಹೆಚ್ಚು ಹಡಗುಗಳು ಬಂದುಹೋದುವು. ಫ್ರಾನ್ಸಿನ ಕ್ರಾಂತಿಯ ತರುವಾಯ ಈ ಪ್ರದೇಶದಲ್ಲಿ ಫ್ರೆಂಚರ ಆಸಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಆದರೆ ಕ್ರಿ.ಶ. 1766ರಲ್ಲಿ  ಫ್ರೆಂಚ್ ಪಾದ್ರಿಗಳಿಂದ ಉಂಟಾದ ಪ್ರಭಾವ ಅಳಿಯಲಿಲ್ಲ.

 ಗುಲಾಮಗಿರಿ ಪದ್ಧತಿ ರದ್ದಾದ ಅನಂತರ ಕಾಂಗೋದಲ್ಲಿಯ ಫ್ರೆಂಚ್ ವ್ಯಾಪಾರಿಗಳು ಅನಧಿಕೃತವಾಗಿ ಗುಲಾಮ ವ್ಯಾಪಾರ ಮಾಡುತ್ತ ಬಂದರು. ಇದರ ವಿರುದ್ಧ ಫ್ರೆಂಚ್ ಸರ್ಕಾರ ಉಗ್ರಕ್ರಮಗಳನ್ನು ತೆಗೆದುಕೊಂಡು ಫ್ರೆಂಚ್ ಸೈನಿಕ ಕಾವಲು ಹಾಕಿತು. ಆದ್ದರಿಂದ ವ್ಯಾಪಾರಿಗಳು ಇತರ ಉದ್ಯೋಗಗಳಿಗೆ ಶರಣು ಹೋಗಬೇಕಾಯಿತು.

 ಎಚ್.ಎಮ್. ಸ್ಟ್ಯಾನ್ಲಿ 1877ರಲ್ಲಿ ಕಾಂಗೋ ನದಿಯ ಮೇಲೆಯೇ ಯಾನ ಮಾಡುತ್ತ ತಲಪಿದ ಸ್ಥಳ ಸ್ಟ್ಯಾನ್ಲಿ ಸರೋವರವೆಂದು ಹೆಸರಾಗಿದೆ.  ಪಿಯೆರೆ ಸವೋರ್ಗ್ನನ್ ಬ್ರ್ಯಾಜû ಅಲ್ಲಿಯ ಮಕಾಕೋನೊಂದಿಗೆ ಒಪ್ಪಂದ ಮಾಡಿಕೊಂಡ. ಆತ ತನ್ನ ಅಧಿಕಾರವನ್ನು ಫ್ರೆಂಚರಿಗೆ ಒಪ್ಪಿಸಿದ. ಕಾಂಗೋ ನದಿಯ ದಂಡೆಯ ಪ್ರದೇಶ ಫ್ರೆಂಚ್ ಅಧೀನಕ್ಕೆ ಬಂತು.

1885 ಮತ್ತು 1887ರಲ್ಲಿ ಆದ ಒಪ್ಪಂದಗಳ ಪ್ರಕಾರ ಪೋರ್ಚುಗೀಸ್ ಮತ್ತು ಕಾಂಗೋಸ್ವತಂತ್ರ ರಾಜ್ಯಗಳ ನಡುವಣ ಗಡಿ ಹೊಂದಾಣಿಕೆಯಾಯಿತು. 1891ರಲ್ಲಿ ಫ್ರೆಂಚ್ ಕಾಂಗೋ ಸ್ಥಾಪಿತವಾಯಿತು. ಜನರಲ್ ಬ್ರ್ಯಾಜû ತನಗೆ ದತ್ತವಾದ ಅಧಿಕಾರಗಳನ್ನು ದುರುಪಯೋಗಪಡಿಸಿಕೊಂಡು ಸ್ಥಳೀಯ ಜನರನ್ನು ಶೋಷಿಸುತ್ತಿದ್ದ. 1905ರಲ್ಲಿ ಫ್ರಾನ್ಸ್ ಈ ವಿಚಾರವನ್ನು ತನಿಖೆ ನಡೆಸಲು ನಿಯೋಗವೊಂದನ್ನು ಕಳಿಸಿತು. ಅಲ್ಲಿಂದ ವಸಾಹತುದಾರರಿಗೆ ನೀಡಲಾಗಿದ್ದ ಸವಲತ್ತುಗಳನ್ನು ಮೊಟಕು ಮಾಡಲಾಯಿತು. 1911ರಲ್ಲಾದ ಒಪ್ಪಂದದ ಪ್ರಕಾರ ಫ್ರಾನ್ಸ್ ಜರ್ಮನಿಗೆ ಕಾಂಗೋ ನದಿಯವರೆಗಿನ ಸಾಂಗ ಕಣಿವೆ ಪ್ರದೇಶವನ್ನೊಪ್ಪಿಸಿತಾದರೂ ಒಂದನೆಯ ಮಹಾಯುದ್ಧದ ಫಲವಾಗಿ ಈ ಒಪ್ಪಂದ ರದ್ದಾಯಿತು. ಫ್ರೆಂಚ್ ಸಮಭಾಜಕೀಯ ಆಫ್ರಿಕಕ್ಕೆ ಬ್ರ್ಯಾಜûವಿಲ್ ರಾಜಧಾನಿಯಾದದ್ದು 1910ರಲ್ಲಿ.

 ಎರಡನೆಯ ಮಹಾಯುದ್ಧ ಕಾಲದಲ್ಲಿ ಫ್ರಾನ್ಸ್ ಜರ್ಮನಿಗೆ ವಶವಾದಾಗ (1940) ಕಾಂಗೋ ರಾಜ್ಯ ಡಗಾಲನ ಸ್ವತಂತ್ರ ಫ್ರಾನ್ಸಿನ ಪರವಾಗಿತ್ತು. 1946ರಲ್ಲಿ ಅದು ಫ್ರಾನ್ಸಿನ ಸಾಗರಾಂತರ ಪ್ರದೇಶವಾಗಿ ಪರಿವರ್ತನೆ ಹೊಂದಿತು. ಅದಕ್ಕೆ ಪ್ರಾದೇಶಿಕ ಸಭೆಯೊಂದು ಸ್ಥಾಪಿತವಾಯಿತು. ಫ್ರೆಂಚ್ ಸಂಸತ್ತಿನಲ್ಲೂ ಅದರ ಪ್ರತಿನಿಧಿಗಳಿದ್ದರು. 1958ರಲ್ಲಿ ಅದು ಫ್ರೆಂಚ್ ಸಮುದಾಯದ ಗಣರಾಜ್ಯವಾಗಿ 1960ರ ಆಗಸ್ಟ್ 15ರಂದು ಸ್ವತಂತ್ರವಾಯಿತು. ಕಾಂಗೋ ದೇಶಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿದ್ದು ಆ ವರ್ಷದ ಸೆಪ್ಟೆಂಬರ್ 20ರಂದು.

 ಫುಲ್‍ಬರ್ಟ್ ಯೌಲೌ ಮತ್ತು ಅಲ್ಫಾಂನ್ಸ್ ಮಸಾಂಬ-ಡಿಬ ಅನುಕ್ರಮವಾಗಿ ಅದರ ಅಧ್ಯಕ್ಷರಾಗಿದ್ದರು. 1966ರ ಜೂನಿನಲ್ಲಿ ಸೈನಿಕ ಬಂಡಾಯ ಸಂಭವಿಸಿತು. ಕ್ಯಾಪ್ಟನ್ ನ್ಗೊಮಾಬಿಯ ಅಂತಸ್ತನ್ನಿಳಿಸಿದ್ದರಿಂದ ಆದ ಅಸಂತುಷ್ಟಿಯೇ ಇದಕ್ಕೆ ಕಾರಣ. 1967ರ ಏಪ್ರಿಲ್ ಮತ್ತು 1968ರ ಜನವರಿ ಮತ್ತು ಮೇ ತಿಂಗಳುಗಳಲ್ಲಿ ಕ್ಷಿಪ್ರಕ್ರಾಂತಿಯ ಪ್ರಯತ್ನಗಳಾದುವು. ಅಶಾಂತಿ ಮುಂದುವರಿಯಿತು. ರಾಷ್ಟ್ರೀಯ ಸಭೆಯ ವಿಸರ್ಜನೆಯಾಯಿತು. ಅಧ್ಯಕ್ಷ ರಾಜೀನಾಮೆಯಿತ್ತ. ರಾಷ್ಟ್ರೀಯ ಕ್ರಾಂತಿ ಸಮಿತಿಗೆ ಪರಮಾಧಿಕಾರ ಲಭ್ಯವಾಯಿತು. ಆ ಸಮಿತಿಯ ಅಧ್ಯಕ್ಷನಾದ ಮೇಜರ್ ನ್ಗೊಯಾಬಿ ರಾಷ್ಟ್ರಾಧ್ಯಕ್ಷನಾದ. ನೆರೆಯ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಅದರ ನಾಯಕರಲ್ಲೊಬ್ಬನಾದ ಪಿಯರ್ ಮ್ಯುಲೆಲ್‍ಗೆ ಫಾಸಿ ಶಿಕ್ಷೆ ವಿಧಿಸಿದ್ದರಿಂದ ಈ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ ಮುರಿದುಬಿತ್ತು. 1969ರ ಜನವರಿಯಲ್ಲಿ ಇವುಗಳ ಸಂಬಂಧದಲ್ಲಿ ಮತ್ತೆ ಯಥಾಸ್ಥಿತಿ ಏರ್ಪಟ್ಟಿತು. 

ಆಫ್ರೋ-ಮಲಗಾಸಿ ಸಾಮಾನ್ಯ ಸಂಸ್ಥೆ (ಓ.ಸಿ.ಎ.ಎಂ.), ಫ್ರೆಂಚ್ ಸಮುದಾಯ, ಆಫ್ರಿಕ ಐಕ್ಯ ಸಂಸ್ಥೆ (ಆರ್ಗನೈಸೇಷನ್ ಫಾರ್ ಆಫ್ರಿಕನ್ ಯೂನಿಟಿ), ವಿಶ್ವಸಂಸ್ಥೆ-ಇವುಗಳಲ್ಲಿ ಕಾಂಗೋ ಗಣರಾಜ್ಯ ಸದಸ್ಯತ್ವ ಪಡೆದಿದೆ.

(ಎ.ಎಂ.ಆರ್.)

 

 